ಹೆಚ್ಚು ಪರಿಶ್ರಮವಿಲ್ಲದೆ ಬೆಳೆಸಬಹುದಾದ ಮತ್ತು ಬಹಳ ಕಾಲದವರೆಗೆ ಉಳಿಯುವ ಗಿಡಗಳಲ್ಲಿ ದಾಸವಾಳವೂ ಒಂದು. ದಾಸವಾಳದಲ್ಲೂ ವಿವಿಧ ಬಗೆಗಳು; ವಿವಿಧ ಬಣ್ಣದ ಹೂಗಳನ್ನು ಬಿಡುವ ಈ ಗಿಡ ಗಾರ್ಡನ್ ಗೆ ಶೋಭೆಯೂ ಹೌದು.ಹಾಗೆಯೇ ಈ ಗಿಡದ ಉಪಯೋಗಗಳೂ ಅನೇಕ. ಸಾಮಾನ್ಯವಾಗಿ ದಾಸವಾಳ ಹೂಗಳನ್ನು ದೇವರ ಪೂಜೆಗೆ ಬಳಸುತ್ತಾರೆ.

ದಾಸವಾಳದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿಯಲು ಮುಂದೆ ಓದಿ…
- ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ದಾಸವಾಳ ಹೂವು ಸಹಕಾರಿ. ಹೀಗಾಗಿಯೇ ಹವಾಯಿ ದ್ವೀಪದ ಜನರು ಹೂಗಳನ್ನು ನೇರವಾಗಿ ತಿಂದರೆ, ಚೀನಾದವರು ಉಪ್ಪಿನಕಾಯಿ ಮಾಡಿಕೊಂಡು ಸೇವಿಸುತ್ತಾರೆ.
- ದಾಸವಾಳ ಗಿಡದ ಎಲೆ ತಲೆಕೂದಲಿನ ಬೆಳವಣಿಗೆಗೆ ಬಹಳ ಒಳ್ಳೆಯದು. ತಲೆಹೊಟ್ಟಿನ ಸಮಸ್ಯೆಗೂ ಇದು ಪರಿಣಾಮಕಾರಿ ಜೊತೆಗೆ ತಲೆಯನ್ನು ತಂಪಾಗಿಡುತ್ತದೆ.
- ದಾಸವಾಳ ಹೂವಿನಿಂದ ತಯಾರಿಸುವ ಜ್ಯೂಸ್ ಮತ್ತು ಟೀ ಆರೋಗ್ಯಕ್ಕೆ ಒಳ್ಳೆಯದು.

- ದಾಸವಾಳದ ಹೂವಿನ ರಸ ಅಥವಾ ದಾಸವಾಳದ ಗುಲ್ಕಂನ್ ತಿನ್ನುವುದರಿಂದ ಬಾಯಾರಿಕೆ, ದಣಿವು ಕಡಿಮೆಯಾಗುತ್ತದೆ.
- ಬಿಳಿದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರಸಿ ಕುಡಿಯುವುದರಿಂದ ಉರಿಮೂತ್ರ ನಿವಾರಣೆಯಾಗುತ್ತದೆ.
- ಪ್ರತಿದಿನ 2-3 ದಾಸವಾಳದ ಹೂಗಳನ್ನು ಹಸಿಯಾಗಿ ಜಗಿದು ನುಂಗಿದರೆ ರಕ್ತ ಮೂಲವ್ಯಾಧಿ ರೋಗಕ್ಕೆ ಒಳ್ಳೆಯದು.
- ಸ್ತ್ರಿಯರು ದಾಸವಾಳದ ಹೂವಿನ ರಸವನ್ನು ಹಾಲಿನೊಡನೆ ಸೇವಿಸಿದರೆ ಅಧಿಕ ರಕ್ತಸ್ರಾವದಿಂದ ಬಳಲುವುದು ಕಡಿಮೆಯಾಗುತ್ತದೆ.

- ಬಿಳಿದಾಸವಾಳದ ಹೂ ಅಥವಾ ಎಲೆಯನ್ನು ಜಜ್ಜಿ ಆ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದು ನಿಂತು ಕೂದಲು ಸೊಂಪಾಗಿ ಬೆಳೆಯುತ್ತದೆ.
- ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಬಿಳಿ ದಾಸವಾಳದ ಹೂ ಮತ್ತು ಗರಿಕೆ ಹುಲ್ಲಿನ ರಸವನ್ನು ಸೇರಿಸಿ ಕುದಿಸಿ ಆರಿಸಿಟ್ಟುಕೊಂಡು ಸುಟ್ಟಗಾಯಗಳಿಗೆ ಲೇಪಿಸಿದರೆ ಗಾಯ ಬೇಗನೆ ಗುಣವಾಗುತ್ತದೆ.
- ಬಿಳಿದಾಸವಾದ ಹೂವಿನ ರಸವನ್ನು ಸೇವಿಸಿದರೆ ಚರ್ಮರೋಗದಿಂದ ಬಳಲುವವರಿಗೆ ಒಳ್ಳೆಯದು.
- ದಾಸವಾಳ ಹೂವಿನ ತೈಲದ ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ.

- ಹೂವು ಹಾಗೂ ಎಲೆಗಳನ್ನು ಒಣಗಿಸಿ, ಸುಟ್ಟ ಬಳಿಕ ಸಿಗುವ ಬೂದಿಯನ್ನು ಹಚ್ಚಿದರೆ, ಕಣ್ಣಹುಬ್ಬುಗಳು ಹೊಳಪು ಪಡೆಯುತ್ತವೆ.
- ದಾಸವಾಳ ಹೂಗಳ ಪಕಳೆಗಳನ್ನು ಶೂಗಳಿಗೆ ತಿಕ್ಕಿದರೆ, ಹೊಳಪು ಬರುತ್ತದೆ.
- ದಾಸವಾಳ ಸಸ್ಯದ ಬೇರನ್ನು ಬಳಸಿ ತಯಾರಿಸುವ ಔಷಧವು ಅನೇಕ ರೋಗಗಳಿಗೆ ರಾಮಬಾಣವಾಗಿದೆ.

- ಈ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ, ಬೇರಿನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೂ ಕುದಿಸಬೇಕು. ಗಾಯಗಳಿಗೆ ಈ ಎಣ್ಣೆ ಲೇಪಿಸಿದರೆ ಗುಣಮುಖವಾಗುತ್ತದೆ.
- ಬಿಳಿ ದಾಸವಾಳ ಎಲ್ಲಕ್ಕಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಹೂವುಗಳನ್ನು ಬೇವಿನ ಮರದ ಅಡಿಯಲ್ಲಿ (ನೆರಳಿನಲ್ಲಿ) ಒಣಗಿಸಬೇಕು. ನಂತರ ಇದನ್ನು ಪುಡಿ ಮಾಡಿ ಸೇವಿಸಿದರೆ ಎಲ್ಲ ಬಗೆಯ ಕ್ಯಾನ್ಸರ್ಗಳಿಗೆ ಉಪಶಮನಕಾರಿ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.